ಫಿಲ್ಮೋರ್, ಚಾರ್ಲ್ಸ್, ಜೆ
	ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ಭಾಷಾ ವಿಜ್ಞಾನದ ಪ್ರಾಧ್ಯಾಪಕ, ಸ್ನಾತಕೋತ್ತರ ಭಾಷಾವಿಜ್ಞಾನ ತರಗತಿಯಲ್ಲಿ ಪ್ರಾಧ್ಯಾಪಕ ಕೆನೆತ್ ಎಲ್ ಪೈಕ್ ಅವರ ವಿದ್ಯಾರ್ಥಿ. 1962ರಲ್ಲಿ ಮಿಶಿಗನ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದರು. ಅರ್ಥ ವಿಜ್ಞಾನ, ಪದಾತ್ಮಕ ಅರ್ಥ ವಿಜ್ಞಾನ, ಸಂಕೇತ ಪ್ರಯೋಗ ವಿಜ್ಞಾನ (ಪ್ರಾಗ್‍ಮ್ಯಾಟಿಕ್ಸ್), ಸಾರ್ವತ್ರಿಕ ಭಾಷಾನಿಯಮ, ಇಂಗ್ಲಿಷ್ ವ್ಯಾಕರಣ, ಜಪಾನ್ ವ್ಯಾಕರಣ, ಕಾರಕವ್ಯಾಕರಣ ಮತ್ತು ವಾಕ್ಯ ಮೀಮಾಂಸೆ ಮೊದಲಾದ ವಿಷಯಗಳಲ್ಲಿ ಬಹುಪರಿಣತರು. ಭಾಷಾವಿಜ್ಞಾನದ ಹಲವಾರು ಪ್ರಮುಖ ನಿಯತಕಾಲಿಕೆಗಳಲ್ಲಿ ಇವರ ಮೂವತ್ತಕ್ಕೂ ಹೆಚ್ಚಿನ ಫ್ರೌಢಲೇಖನಗಳು ಪ್ರಕಟವಾಗಿವೆ. ಇನ್‍ಡೈರೆಕ್ಟ್ ಆಬ್ಜೆಕ್ಟ್ ಕನ್‍ಸ್ಟ್ರಕ್ಷನ್ ಇನ್ ಇಂಗ್ಲಿಷ್ ಅಂಡ್ ದಿ ಆರ್ಡರಿಂಗ್ ಆಫ್ ಟ್ರಾನ್ಸ್‍ಫಾರ್ಮೆಷನ್ಸ್ (1962), ದಿ ಪೊಸಿಷನ್ ಆಫ್ ಎಮ್ಬೆಡ್ಡಿಂಗ್ ಟ್ರಾನ್ಸ್‍ಫಾರ್ಮೆಷನ್ಸ್ ಇನ್ ಎ ಗ್ರಾಮರ್ (1963), ಎಂಬ ಪ್ರಬಂಧಗಳು ಅನೇಕ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾದವು. 1965 ಮತ್ತು 1968ರಲ್ಲಿ ಓಹಿಯೋ ವಿಶ್ವವಿದ್ಯಾಲಯದಲ್ಲಿ ನಡೆಸಿದ ಸಂಶೋಧನೆಯ ಫಲವಾಗಿ, ಎನ್‍ಟೇಲ್‍ಮೆಂಟ್ ರೂಲ್ಸ್ ಇನ್ ಎ ಸಿಮ್ಯಾಂಟಿಕ್ ತಿಯರಿ ಮತ್ತು ಟೈಪ್ಸ್ ಆಫ್ ಲೆಕ್ಸಿಕಲ್ ಇನ್‍ಫರ್ಮೆಷನ್ ಎಂಬ ಸಂಶೋಧನಾ ಲೇಖನಗಳು ಯೋಜನೆಯ ವರದಿಗಳಾಗಿವೆ. 1967ರಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯ ಆಸ್ಟಿನ್‍ನಲ್ಲಿ ನಡೆಸಿದ ಯೂನಿವರ್ಸ್‍ಲ್ಸ್ ಇನ್ ಲಿಂಗ್ವಿಸ್ಟಿಕ್ ಥಿಯರಿ ಎಂಬ ವಿಚಾರಗೋಷ್ಠಿಯಲ್ಲಿ ಮಂಡಿಸಿದ ಇವರ ಕಾರಕ ವ್ಯಾಕರಣ (ದ ಕೇಸ್ ಫಾರ್ ಕೇಸ್) ಎಂಬ ಪ್ರಬಂಧ ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ. ವಾಕ್ಯದ ಮೂಲರಚನೆಯು ಕ್ರಿಯಾಪದ ಮತ್ತು ಒಂದು ಅಥವಾ ಅದಕ್ಕಿಂತ ಹೆಚ್ಚಿನ ನಾಮಗುಚ್ಛಗಳಿಂದ ಕೂಡಿದೆ. ಪ್ರತಿಯೊಂದು ನಾಮಗುಚ್ಛವೂ ಕ್ರಿಯಾಪದದೊಂದಿಗೆ ನಿಶ್ಚಿತ `ಕಾರಕ ಸಂಬಂಧ ಹೊಂದಿದೆ. ಇಲ್ಲಿ `ಕಾರಕ ಎನ್ನುವುದು ನಾಮಪದಗಳಿಗೆ ಹತ್ತುವ ಪ್ರತ್ಯಯ ರೂಪಗಳಷ್ಟೇ ಎಂಬರ್ಥವಲ್ಲ; ಕರ್ತೃ, ಕರ್ಮ, ಕರಣ, ಅಧಿಕರಣ ಎಂಬ ಅರ್ಥ ಸಂಬಂಧದಲ್ಲಿ `ಕಾರಕ ಎಂದು ಕರೆದು, 'ಕಾರಕ ರೂಪಗಳಿಂದ ವಾಕ್ಯವನ್ನು ಸಾಧಿಸುವ ಕ್ರಮ ಕಾರಕವ್ಯಾಕರಣ ಎನಿಸಿದೆ. ಕಾರಕದ ಆಧಾರದ ಮೇಲೆ ನಿರ್ಧರಿಸುವ ಅರ್ಥದ ಸಂಬಂಧವನ್ನು ಮೂಲಕಾರಕ ಸಂಬಂಧ (ಡೀಪ್ ಕೇಸ್ ರಿಲೇಷನ್ಸ್) ಎಂದು ಫಿಲ್ಮೋರ್ ಕರೆದರು. ವಾಕ್ಯಗಳನ್ನು ಸಾಧಿಸಲು ಕಾರಕ ರೂಪಗಳಿಗೆ ಕ್ರಿಯಾ ಪದಗಳನ್ನೇ ಆರಿಸಿಕೊಂಡರು.

	1917ರಲ್ಲಿ ಫಿಲ್ಮೋರ್ ಮತ್ತು ಡಿ ಟೆರೆನ್ಸ್ ಲ್ಯಾಂಗೆನ್ಡನ್ ಅವರ ಸಹ ಸಂಪಾದಕತ್ವದಲ್ಲಿ `ಸ್ಟಡೀಸ್ ಇನ್ ಲಿಂಗ್ವಿಸ್ಟಿಕ್ ಸಿಮ್ಯಾಂಟಿಕ್ಸ್ ಎಂಬ ಪುಸ್ತಕ ಪ್ರಕಟವಾಯಿತು. ಅರ್ಥವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಅನೇಕ ಹೊಸ ವಿಷಯಗಳನ್ನು ಈ ಪುಸ್ತಕ ಒಳಗೊಂಡಿದೆ. ಭಾಷಾಭ್ಯಾಸಿಗಳಿಗೆ ಇದೊಂದು ಉಪಯುಕ್ತ ಕೃತಿ. ಟುವಡ್ರ್ಸ್ ಎ ಮಾಡರ್ನ್ ತಿಯರಿ ಆಫ್ ಕೇಸ್ (1966), ಸಮ್ ಪ್ರಾಬ್ಲಮ್ಸ್ ಫಾರ್ ಕೇಸ್‍ಫಾರ್ ಕೇಸ್ ಗ್ರಾಮರ್ (1971). ಫ್ರೇಮ್ ಸಿಮ್ಯಾಂಟಿಕ್ಸ್ ಅಂಡ್ ದಿ ನೇಚರ್ ಆಫ್ ಲಾಂಗ್ವೇಜ್ (1975)-ಮುಂತಾದ ಇವರ ಲೇಖನಗಳು ಭಾಷಾ ವಿಜ್ಞಾನ ಕ್ಷೇತ್ರಕ್ಕೆ ಮಹತ್ತ್ವದ ಕೊಡುಗೆಯಾಗಿವೆ. ಇವರ ಪೇಪರ್ಸ್ ಇನ್ ಲಿಂಗ್ವಿಸ್ಟಿಕ್ಸ್ ಎಂಬ ಭಾಷಾವಿಜ್ಞಾನ ನಿಯತಕಾಲಿಕದ ಸಂಪಾದಕೀಯ ಮಂಡಲಿಯ ಸದಸ್ಯರಾಗಿದ್ದಾರೆ. ಇವರ ಇತ್ತೀಚಿನ ಕಾರ್ಯಕ್ಷೇತ್ರವಾದ ಫ್ರೇಮ್ ಸಿಮ್ಯಾಂಟಿಕ್ಸ್ ಎಂಬುದು ಭಾಷಾವಿಜ್ಞಾನಿಗಳ ಗಮನ ಸೆಳೆದಿದೆ.	
		   (ಸಿ.ಎಸ್.ಆರ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ